ಚಾರಿತ್ರಿಕ ಭೌಗೋಳಿಕ ವಿಧಾನ-
ಮುಖ್ಯವಾಗಿ, ಜನಪದ ಕಥೆಗಳಿಗೆ ಪ್ರೇರಕವಾಗಿರುವ ಮೂಲಮಾತೃಕೆಯನ್ನು ಚಾರಿತ್ರಿಕ ಬೆಳೆವಣಿಗೆ ಮತ್ತು ಭೌಗೋಳಿಕ ಹಂಚಿಕೆಗಳ ಆಧಾರದಿಂದ ಕಂಡುಹಿಡಿಯುವುದಕ್ಕೆ ಉದ್ದೇಶಿತವಾದ ಸಿದ್ಧಾಂತವಿದು (ಹಿಸ್ಟಾರಿಕ್ ಜಿಯೋಗ್ರ್ಯಾಫಿಕಲ್ ಸ್ಕೂಲ್). ಆದರೆ ಜಾನಪದದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಇದರ ಕ್ಷೇತ್ರ ವಿಸ್ತರಿಸಲೂಬಹುದು. ಕಳೆದ ಶತಮಾನದ ಕಡೆಯ ಅರ್ಧಭಾಗದಲ್ಲಿ ಜೂಲಿಯಸ್ ಕ್ರೋಹ್ನ ಮತ್ತು ಕಾರ್ಲೆ ಕ್ರೋಹ್ನ (ತಂದೆಮಕ್ಕಳು) ಅವರಿಂದ ಈ ವಿಧಾನ ಬಳಕೆಗೆ ಬಂತು. ಆದರೆ ಇದರ ಪ್ರಧಾನ ಪ್ರಯೋಗಗಳು ನಡೆದುದು ತೀರ ಇತ್ತೀಚೆಗೆ ಎನ್ನಬೇಕು. ಜನಪದ ಗೀತೆಗಳನ್ನು ಕುರಿತ ತನ್ನ ಅಧ್ಯಯನದಲ್ಲಿ ಜೂಲಿಯಸ್ ಕ್ರೋಹ್ನ ಅವನ್ನು ಅಂಶ ಘಟಕಗಳಾಗಿ ವಿಶ್ಲೇಷಿಸಿದ ಮತ್ತು ಈ ಅಂಶಗಳ ವಿತರಣೆಯನ್ನು ಕುರಿತು ವಿಚಾರ ಮಾಡಿದ. ವ್ಯವಸ್ಥಿತವಾಗಿ ಹಾಗೂ ಪ್ರಥಮತಃ ಈ ವಿಧಾನವನ್ನು ಕಾರ್ಲೆ ಕ್ರೋಹ್ನ ಜನಪದ ಕಥೆಯ ಸಂಶೋಧನೆಯಲ್ಲಿ ಬಳಸಿದ. 1880ರಲ್ಲಿ ನಡೆದ ಇವನ ಮಾರ್ಗದರ್ಶಕ ಅಧ್ಯಯನ ಮತ್ತು ತತ್ತ್ವಗಳ ಸೂತ್ರೀಕರಣದ ದಿವಸದಿಂದ ಈ ಬಗೆಯ ವಿಶ್ಲೇಷಣಾತ್ಮಕ ಅಧ್ಯಯನವನ್ನು ವಿದ್ವಾಂಸರು ಫಿನ್ಲೆಂಡಿನ ವಿಧಾನವೆಂದೂ ಕರೆಯಲು ಪ್ರಾರಂಭಿಸಿದರು. ಇದನ್ನು ಮತ್ತಷ್ಟು ಮುಂದುವರಿಸಿದವ ಆಂಟಿ ಆರ್ನೆ. ಅತ್ಯಂತ ಆಧುನಿಕವಾಗಿ ರೂಪಿಸಿದವ ಸ್ಟಿತ್ ಥಾಂಪ್ಸನ್. ಆಗಲೂ ಈ ವಿಧಾನವನ್ನು ಐತಿಹ್ಯ, ಆಟ, ಒಗಟು, ಲಾವಣಿ ಮೊದಲಾದ ಪ್ರಕಾರಗಳಿಗೆ ಬಳಸಿದ್ದರೂ ಬಹುಮಟ್ಟಿಗೆ ಜನಪದ ಕಥೆಗಳಿಗೇ ಹೆಚ್ಚು ಅನ್ವಯಿಸಲಾಗಿತ್ತು.

ಪ್ರತಿಯೊಂದು ಕಥೆಯೂ ತನ್ನದೇ ಇತಿಹಾಸವನ್ನು ಹೊಂದಿರುತ್ತದಾಗಿ ಅದನ್ನು ಪ್ರತ್ಯೇಕವಾಗಿ ಅನ್ವೇಷಿಸಬಹುದಾಗಿದೆ. 19ನೆಯ ಶತಮಾನದ ವಿವಿಧ ವಿದ್ವಾಂಸರು ಸೈದ್ಧಾಂತಿಕ ನೆಲಗಟ್ಟಿನಮೇಲೆ, ಯಾವುದೇ ಸಮಗ್ರ ಅಧ್ಯಯನವಿಲ್ಲದೆ, ಜನಪದ ಕಥೆಗಳ ಉಗಮ ಮತ್ತು ಅರ್ಥಗಳ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದರು. ಚಾರಿತ್ರಿಕ ಭೌಗೋಳಿಕ ವಿಧಾನ ಎರಡನೆಯದಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸುವುದಿಲ್ಲ, ಆದರೆ ಮೊದಲನೆಯದಕ್ಕೆ ಮಾತ್ರ ಸಂಭವನೀಯ ಗುರಿಯಾಗಿ ಕಾಣಿಸಿಕೊಳ್ಳುತ್ತದೆ.

ಕಥೆಯ ಉಗಮದ ಜಾರಿತ್ರಿಕ ಸತ್ಯಕ್ಕೆ ತಲುಪಲು ಹತ್ತಿರದ ಹಾದಿ ಇಲ್ಲವಾದುದರಿಂದ, ಪ್ರತಿಕಥೆಯನ್ನೂ ಅದರ ಎಲ್ಲ ಪಾಠಾಂತರಗಳೊಡನೆ ಅಧ್ಯಯನ ಮಾಡಿದಾಗ ಮಾತ್ರ ನಿಜವಾದ ವಿಚಾರ ಹೊರಬೀಳಬಹುದೆಂಬುದನ್ನು ಈ ವಿಧಾನ ತಿಳಿಸಿತು. ಹಲವು ಪಾಠಾಂತರಗಳು ಕಥೆಯ ಪೂರ್ಣಚರಿತ್ರೆಯ ಪುನರ್ರಚನೆಗೆ ಅಗತ್ಯವಾಗಿ ಬೇಕಾಗುತ್ತವೆ. ಆದ್ದರಿಂದ ಈ ಪಾಠಾಂತರಗಳ ತೌಲನಿಕ ಅಧ್ಯಯನ ಮತ್ತು ಚಾರಿತ್ರಿಕ ಸಂಶೋಧನೆಗಳು ಜನಪದಕಥೆಯ ಅಧ್ಯಯನದಲ್ಲಿ ವಿಶಿಷ್ಟ ಶಕ್ತಿಯಾಗಿ ಪರಿಣಮಿಸುತ್ತವೆ. ನಿರ್ದಿಷ್ಟ ಕಥೆಯ ಜೀವನಚರಿತ್ರೆಯೇ ಇದರ ಗುರಿ. ಅದರ ಹುಟ್ಟಿನ ನಿಜವಾದ ಮಾಹಿತಿಯೇ ಇದರ ಉದ್ದೇಶ. ಹಾಗೆ ಮಾಡುವಾಗ ಪಾಠಾಂತರಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕು. ಇದಕ್ಕೆ ಅಗತ್ಯವಾದ ಚಾರಿತ್ರಿಕ ಹಾಗೂ ಭೌಗೋಳಿಕ ವಿಷಯ ಸನ್ನಿವೇಶಗಳನ್ನು ಗಮನಕ್ಕೆ ತಂದುಕೊಳ್ಳಬೇಕು. ಆ ಮೇಲೆ ಬಾಯಿ ಮಾತಿನ ಮೂಲಕ ಆದ ವ್ಯತ್ಯಾಸಗಳನ್ನು ವ್ಯವಸ್ಥಿತಗೊಳಿಸುವುದರಿಂದ ಅದರ ಮೂಲರೂಪವನ್ನು ಕಂಡುಹಿಡಿಯಬಹುದು. ಆ ಮೂಲರೂಪದಿಂದ ಇಷ್ಟೊಂದು ಪಾಠಾಂತರಗಳಾಗುವುದಕ್ಕೆ ಹಾಗೂ ಹಾಗೆ ಆಗುವಾಗ ನಡೆದ ವ್ಯತ್ಯಾಸಕ್ಕೆ ಕಾರಣಗಳನ್ನು ಕಾಣಿಸಬೇಕು. ಇದಲ್ಲದೆ ಈ ಅಧ್ಯಯನದಿಂದ ಕಥೆಯ ಉಗಮದ ಸ್ಥಳ, ಪ್ರಸಾರ ಮತ್ತು ಕಾಲ ಕೂಡ ಗೊತ್ತಾಗುತ್ತವೆ.

ಚಾರಿತ್ರಿಕ-ಭೌಗೋಳಿಕ ವಿಧಾನದಲ್ಲಿ ಮೊದಲು ಮಾಡಬೇಕಾದ ಕೆಲಸವೆಂದರೆ ಭಿನ್ನಪಾಠಗಳ ಸಂಗ್ರಹ. ಅದರ ಮುಂದಿನ ಹಂತ ದೊರೆತ ಪಾಠಾಂತರಗಳ ಕಾಲಾನುಕ್ರಮವಾದ ಹಂಚಿಕೆ ಮತ್ತು ಕ್ರಮಬದ್ಧವಾದ ವ್ಯವಸ್ಥೆ. ಈ ಮೂಲಭೂತ ವಿಷಯಗಳನ್ನು ಗಮನಿಸಿದ ಮೇಲೆ ಅವುಗಳ ವಿಶೇಷ ವೈಲಕ್ಷಣ್ಯಗಳಿಗನುಗುಣವಾಗಿ ಪ್ರತಿ ಕಥೆಯನ್ನೂ ವಿಶ್ಲೇಷಣೆಗೆ ಒಡ್ಡಬೇಕು. ಹಾಗೆ ಮಾಡುವಾಗ, ಕಥೆಯ ಬಗೆಗಿನ ಎಲ್ಲ ವಿಷಯಗಳನ್ನೂ ಬೆಳೆವಣಿಗೆಯ ಎಲ್ಲ ಹಂತಗಳನ್ನೂ ಗುರುತಿಸಬೇಕಾಗುತ್ತದೆ. ಕಥೆಯ ಮೂಲಪ್ರತಿಯ ಅನ್ವೇಷಣೆಯಲ್ಲಿ ಅದರ ವೈಲಕ್ಷಣ್ಯ ಪರಿಶೀಲನೆ ಮುಖ್ಯವಷ್ಟೇ. ಈ ಪ್ರತಿಯೊಂದು ವಿಶೇಷ ಲಕ್ಷಣವನ್ನೂ ಹೇಗೆ ಪರೀಕ್ಷಿಸಬೇಕೆಂಬುದಕ್ಕೆ ಆಂಟಿ ಆರ್ನೆ ಕೆಲವು ವಿಧಾನಗಳನ್ನು ಸೂಚಿಸುತ್ತಾನೆ. 1 ಇದರ ಬರುವಿಕೆಯ ಸಾಪೇಕ್ಷ ಆವೃತ್ತಿ ; 2 ಇದರ ವಿತರಣೆಯ ಹರವು; 3 ಪ್ರಸಾರದ ದಿಶೆಯಲ್ಲಿ ಪೂರ್ಣವರ್ಗದೊಡನೆ ಮಾಡಿಕೊಂಡ ಇದರ ಒಪ್ಪಂದ; 4 ಸುರಕ್ಷಿತ ಪಾಠಗಳಲ್ಲಿ ಇದರ ಹಾಜರಿ; 5 ಲಕ್ಷಣವನ್ನು ಸುಲಭವಾಗಿ ನೆನಪಿಡುವಂತೆ ಮಾಡುವ ಇದರ ಗಮನಾರ್ಹ ಗುಣಗಳು ; 6 ಇದರಲ್ಲಿನ ಸ್ವಾಭಾವಿಕತೆಗೂ ಉಳಿದವುಗಳಲ್ಲಿನ ಅಸ್ವಾಭಾವಿಕತೆಗೂ ಇರುವ ವೈದೃಶ್ಯ. 7 ಕಥನಕ್ರಿಯೆಯಲ್ಲಿ ಇದರ ವಿಶೇಷ ಸ್ಥಾನ. 8 ಏಕಮಾತ್ರಕಥೆಯಲ್ಲಿ ಇದರ ಬರುವಿಕೆ. 9 ಇದರಿಂದ ಸುಲಭವಾಗಿ ಬೆಳೆವಣಿಗೆ ಹೊಂದಬಹುದಾದ ರೂಪಗಳ ಸಾಧ್ಯತೆ. ಈ ಪರೀಕ್ಷೆಯಿಂದ ಯಾವ ರೂಪಗಳು ಮೂಲಪ್ರತಿಗೆ ಸಂಬಂಧಿಸಿದವು, ಯಾವುವು ಅನಂತರ ಬೆಳೆವಣಿಗೆ ಹೊಂದಿದವು ಎಂಬುದನ್ನು ತಿಳಿಯಬಹುದು.

ಜನಪದ ಕಥೆಗಳನ್ನು ಹೀಗೆ ಅಧ್ಯಯನ ಮಾಡುವಾಗ, ವಾಚಿಕ ಪಾಠಗಳನ್ನು ಭೌಗೋಳಿಕವಾಗಿಯೂ ಸಾಹಿತ್ಯಿಕ ಪಾಠಗಳನ್ನು ಚಾರಿತ್ರಿಕವಾಗಿಯೂ ಸಂಯೋಜಿಸಬೇಕಾಗುತ್ತದೆ. ಭೌಗೋಳಿಕವಾಗಿ ವರ್ಗೀಕರಿಸಿಕೊಳ್ಳುವುದು ಕಥೆಯ ಮೂಲದ ದೃಷ್ಟಿಯಿಂದ ಹೆಚ್ಚು ಅನುಕೂಲವನ್ನು ತರುತ್ತದೆ. ಜನಪದ ಕಥೆಗಳು ಸಾಹಿತ್ಯಿಕ ಕಥೆಗಳಿಗೆ ಮೂಲವಾಗಿರಬಹುದು. ಹಾಗೆಯೇ ಸಾಹಿತ್ಯಿಕ ಕಥೆಗಳಿಂದ ಜನಪದ ಕಥೆಗಳು ಬಂದಿರಬಹುದು. ಆದ್ದರಿಂದ, ಅವುಗಳ ಪ್ರಸಾರದ ಕಾಲ ಮತ್ತು ಸ್ಥಳಗಳನ್ನು ಹೆಚ್ಚು ಪ್ರಚಲಿತವಾಗಿರುವ ಪ್ರದೇಶಗಳಿಂದ ಪತ್ತೆಹಚ್ಚುವುದರ ಮೂಲಕ ಭೌಗೋಳಿಕ ವಿತರಣೆಯನ್ನು ಗುರುತಿಸಬೇಕಾಗುತ್ತದೆ. ಅನಂತರ ಅವುಗಳೊಡನೆ ಚಾರಿತ್ರಿಕ ವ್ಯತ್ಯಾಸವನ್ನು ಹೋಲಿಸಿ ಮೂಲಪ್ರತಿಯನ್ನು ನಿರ್ಧರಿಸಬೇಕಾಗುತ್ತದೆ. ಪ್ರಾಚೀನ ಅಥವಾ ಅರ್ವಾಚೀನ ಸಾಹಿತ್ಯಿಕ ದಾಖಲೆಗಳು ಸಿಕ್ಕಿದರೆ, ಅವುಗಳ ಕಾಲ ಗೊತ್ತಿರುವುದರಿಂದ, ಸಂಬಂಧಪಟ್ಟ ಜನಪದ ಕಥೆಯ ಮೂಲ ಸ್ವರೂಪವನ್ನು ಕಂಡುಹಿಡಿಯುವುದು ಕಷ್ಟವಾಗಲಾರದೆಂದು ತೋರುತ್ತದೆ.

ಹೀಗೆ ಎಲ್ಲ ವಿವರಗಳನ್ನೂ ಪರಿಶೀಲಿಸಿದಾಗ, ಕೆಲವು ನಿರೂಪಣೆಗಳು ಪ್ರಧಾನವಾಗಿರುವುದು ಕಂಡುಬಂದು, ಮೂಲಪ್ರತಿಗೆ ಇವು ಸಂಬಂಧಿಸಿರಬಹುದೆಂದು ಗೊತ್ತಾಗುತ್ತದೆ. ಇಷ್ಟಾದರೂ ಇದು ನಿಸ್ಸಂದೇಹವಾದುದೆಂದು ಹೇಳಲಾಗುವುದಿಲ್ಲ. ಆದ್ದರಿಂದ ಈ ಪ್ರಧಾನವಾದವುಗಳಿಗಿಂತ ಭಿನ್ನವಿರುವ ವಿಷಯಗಳನ್ನು ಅಧ್ಯಯನಮಾಡಿ ಸ್ಥಳೀಯ ಮೂಲಗಳನ್ನು ಕಂಡುಹಿಡಿಯಬೇಕು, ಆ ಮೂಲಕ ಪ್ರಾದೇಶಿಕ ಉಪಮಾತೃಕೆಗಳನ್ನು ಸ್ಥಾಪಿಸಬೇಕು. ಈ ಉಪಮಾತೃಕೆಗಳಿಂದ ಸಾರ್ವತ್ರಿಕ ಮೂಲಮಾತೃಕೆಯನ್ನು ಸ್ಥಾಪಿಸಲು ಹೊರಡಬೇಕಾಗುತ್ತದೆ. ಈ ಉಪಮಾತೃಕೆಗಳು ಮತ್ತು ಮೂಲಮಾತೃಕೆ ಊಹನಾತ್ಮಕ ರಚನೆಗಳಾಗಿದ್ದು, ಜನಪದ ಕಥೆಯೊಂದು ಪ್ರಸಾರವಿರುವ ಪ್ರದೇಶದ ತುಂಬ ಮತ್ತು ಕೆಲವು ಪ್ರದೇಶಗಳಿಗೆ ಮಾತ್ರ ಪರಿಮಿತವಾದಂತೆ ಲಭ್ಯವಿರುವ ಅದರ ಪಾಠಗಳನ್ನು ವಿವರಿಸಲು ಅನುಕೂಲವಾಗುತ್ತವೆ.

ಚಾರಿತ್ರಿಕ-ಭೌಗೋಳಿಕ ವಿಧಾನ ಪ್ರಧಾನವಾಗಿ ಜಾನಪದ ಆಶಯಗಳಿಗೆ ಸಂಬಂಧ ಪಟ್ಟದ್ದು. ಆಶಯಗಳ ನಿರ್ದಿಷ್ಟ ಭೌಗೋಳಿಕ ಆವರಣದ ಸೃಷ್ಟಿಯನ್ನು ಅವುಗಳ ರೂಪಾಂತರ ಪಾಠಾಂತರಗಳ ಚರಿತ್ರಾಂಶಗಳನ್ನು ಈ ವಿಧಾನ ವಿವರಿಸುತ್ತದೆ. ಆರ್ನೆ ಹೇಳುತ್ತಾನೆ-ಮೂಲತಃ ಪ್ರತಿಯೊಂದು ಆಶಯವೂ ನಿರ್ದಿಷ್ಟ ಕಥೆಯೊಂದರ ಭಾಗವಾಗಿದ್ದು, ಇತರ ವರ್ಗಗಳಲ್ಲಿ ಇದು ಆಗಾಗ್ಗೆ ಕಾಣಿಸಿಕೊಂಡರೂ ಸಂಬಂಧಿಸಿದ ಮೂಲ ಕಥೆಯಿಂದಲೇ ಇದು ಬಂದುದಾಗಿರುತ್ತದೆ. ಹಲವಾರು ಆಶಯಗಳು ಸ್ವತಂತ್ರ ಕಥನಗಳೂ ಆಗಿರುವ ಸಾಧ್ಯತೆ ಇರುವುದರಿಂದ ಈ ಮಾತನ್ನು ಅತಿರೇಕವೆನ್ನದೆ ವಿಧಿಯಿಲ್ಲ. ಆಶಯಗಳು ಸಾರ್ವತ್ರಿಕವಾಗಿರುವಂತೆಯೇ ನಿರ್ದಿಷ್ಟ ಪ್ರಾದೇಶಿಕವೂ ಆಗಿರುತ್ತವೆ ಎಂಬುದನ್ನು ಇಲ್ಲಿ ನೆನಸಿಕೊಳ್ಳಬಹುದು. ಹೀಗಾಗಿ ಒಂದು ಕಡೆ ಭೌಗೋಳಿಕ ಆವರಣವನ್ನೂ ಮತ್ತೊಂದು ಕಡೆ ಚಾರಿತ್ರಿಕ ಬೆಳವಣಿಗೆಯನ್ನೂ ಕಾಣುತ್ತೇವೆ. ಇಲ್ಲಿಯೇ ಈ ವಿಧಾನ ಮಹತ್ತ್ವದ ಪಾತ್ರವನ್ನು ವಹಿಸುವುದು. ಆದ್ದರಿಂದ ಚಾರಿತ್ರಿಕ-ಭೌಗೋಳಿಕ ಅಧ್ಯಯನ ಪ್ರಧಾನವಾಗಿ ಕಥನ ವಿಷಯಕ್ಕೆ ಸಂಬಂಧಿಸಿದುದಾಗಿದೆ. ಈ ವಿಧಾನ ವಾಕ್‍ಸಂಪ್ರದಾಯದ ಕಥೆಗಳ ಅಧ್ಯಯನಕ್ಕೆ ಉಪಯೋಗಿಸುವ ವಿಶೇಷ ತಂತ್ರವಾಗಿದೆ. ಪಾಠಾಂತರಗಳು ಹೆಚ್ಚು ದೊರಕಿದಂತೆಲ್ಲ ಈ ತಂತ್ರ ಯಶಸ್ವಿಯಾಗುತ್ತದೆ.

ಈ ವಿಧಾನ ಕೊಡುವ ಫಲಿತಾಂಶಗಳಿಂದ ಸಂಪೂರ್ಣ ತೃಪ್ತಿ ದೊರಕುವ ಹಾಗಿಲ್ಲ. ಮೇಲೆ ಉಲ್ಲೇಖಿಸಿದ ವ್ಯಾಖ್ಯಾನದಲ್ಲಿ ಕೊರತೆಗಳಿರುವುದು ಸಾಧ್ಯ. ಇದು ಸಾಹಿತ್ಯಿಕ ನಿರೂಪಣೆಗಳನ್ನು ಸರಿಯಾಗಿ ಬೆಲೆ ಕಟ್ಟಲಿಲ್ಲ; ಸಂಪ್ರದಾಯದ ಕ್ರಿಯಾಶೀಲವಾಹಕದ ಪಾತ್ರವನ್ನು ತಾತ್ಸಾರ ಮಾಡಿತು; ಕಥೆಗಳ ಇತಿಹಾಸದಲ್ಲಿ ಭಾಷಿಕ ಮೂಲಕದ ಸಂಬಂಧದ ಕಡೆಗೆ ಸಾಕಷ್ಟು ಗಮನಹರಿಸಲಿಲ್ಲ. ಈ ಕೆಲವು ಕಾರಣಗಳನ್ನು ಇಟ್ಟುಕೊಂಡೇ ಕೆಲವರು ಈ ಸಿದ್ಧಾಂತವನ್ನು ವಿರೋಧಿಸಿದುದು.

ಹೀಗೆಯೇ ಈ ಸಿದ್ಧಾಂತ ಜಾನಪದದ ಹಲವಾರು ಪ್ರಮುಖ ಪ್ರಶ್ನೆಗಳತ್ತ ನೋಡಲಿಲ್ಲ. ಶೈಲಿಯ ಅಧ್ಯಯನಗಳಿಗಾಗಲಿ ಅಥವಾ ಗೊತ್ತಾದ ಪಾಠಕ್ಕೂ ಅದರ ಸಾಮಾಜಿಕ ಹಿನ್ನೆಲೆಗೂ ಇರುವ ಸಂಬಂಧವನ್ನು ಕುರಿತಾಗಲಿ ಪ್ರಯತ್ನಿಸುವುದಿಲ್ಲ. ಹಾಗಿದ್ದರೂ ತನ್ನದೇ ಸೀಮಿತ ಕ್ಷೇತ್ರದಲ್ಲಿ ಇದು ನಿಷ್ಕøಷ್ಟ ವಿಶ್ಲೇಷಣಾತ್ಮಕ ವಿಧಾನವಾಗಿ ಬೆಳೆವಣಿಗೆ ಹೊಂದಿದೆ. ಇದರಲ್ಲಿ ಏನೇ ದೌರ್ಬಲ್ಯವಿರಲಿ, ನಿಸ್ಸಂದೇಹವಾಗಿಯೂ ಇದು ಜಾನಪದದ ಸಂಕೀರ್ಣ ಅಂಶಗಳ ಪ್ರಸಾರವನ್ನು ಕುರಿತಾದ ಗಂಭೀರ ಅಧ್ಯಯನಗಳಿಗೆಲ್ಲ ಆಧಾರವನ್ನು ರೂಪಿಸುತ್ತದೆ; ಜನಪದ ಕಥೆಗಳ ಉಗಮ, ವಿಕಾಸ, ಪ್ರಸಾರಗಳ ಅಧ್ಯಯನದ ರಾಜಬೀದಿಯಲ್ಲಿ ಈ ವಿಧಾನ ಒಂದು ದೊಡ್ಡ ದೀಪಸ್ತಂಭವಾಗಿದೆ.   						(ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ